ವೀಣೆ ಶೇಷಣೄ ಭವನಕ್ಕೆ 28 ವರ್ಷ ತುಂಬಿದ ಪ್ರಯುಕ್ತ ಭವನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಗಾನಭಾರತೀ ಅಕ್ಟೋಬರ್ 26ರಂದು ಭವನದ ದಿನಾಚರಣೆಯ ಅಂಗವಾಗಿ ವಿ|| ದೊರೆಸ್ವಾಮಿ ಅಯಂಗಾರ್ಯರ ಶತಮಾನೋತ್ಸವವನ್ನು ಆಚರಿಸುತ್ತಿದೆ. ಅಂದು ಸಂಜೆ 5:30ಕ್ಕೆ ಗಂಟೆಗೆ ಡಾ. ವಿ ದೊರೆಸ್ವಾಮಿ ಅಯಂಗಾರ್ಯರ ಪುತ್ಥಳಿಯನ್ನು ಅನಾವರಣಗೊಳಿಸಲಾಗುತ್ತದೆ. ದೊರೆಸ್ವಾಮಿ ಅಯಂಗಾರ್ಯರು ವೀಣೆ ಶೇಷಣ್ಣ ಪರಂಪರೆಯ ಪ್ರಮುಖ ಪ್ರತಿನಿಧಿ. ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿ ಪುರಸ್ಕೃತರು. ಪದ್ಮಭೂಷಣ, ಚೌಡಯ್ಯ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಸಂದಿವೆ. ವೀಣೆ ಶೇಷಣ್ಣ ಪರಂಪರೆಯ ದ್ಯೋತಕವಾಗಿ ಸ್ಥಾಪಿತವಾದ ವೀಣೆ ಶೇಷಣ್ಣ ಭವನದ ದಿನಾಚರಣೆಯ ಸಂದರ್ಭದಲ್ಲಿ ಅವರ ಪರಂಪರೆಯ ಪ್ರಮುಖ ಪ್ರತಿಯನಿಧಿಯ ನೆನಪಿಗಾಗಿ ಅವರ ಪುತ್ಥಳಿಯನ್ನು ಸ್ಥಾಪಿಸುವುದು ಸಮಯೋಚಿತ ಎಂದು ಭಾವಿಸಿ ಗಾನಭಾರತಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಅಂದು ಮುಖ್ಯ ಅತಿಥಿಗಳಾದ ಮೈಸೂರು ರಾಜಕುಟುಂಬದ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದಾರೆ.
ಅಂದೇ ಶೇಷಣ್ಣ ಪರಂಪರೆಯ ಪ್ರಮುಖ ಕಲಾವಿದರಾದ ವಿದ್ವಾನ್ ಡಿ ಬಾಲಕೃಷ್ಣ ಅವರು ತಮ್ಮ ಹಿರಿಯ ಶಿಷ್ಯರಾದ ವಿದುಷಿ ವಾಣಿ ಯದುನಂದನ್ ಮತ್ತು ವಿದ್ವಾನ್ ಶ್ರಿÃನಿವಾಸ ಪ್ರಸನ್ನ ಅವರೊಂದಿಗೆ ವೀಣಾವಾದನ ಪ್ರಸ್ತುತಪಡಿಸಲಿದ್ದಾರೆ. ಹಿರಿಯ ವೀಣಾವಾದಕರಾದ ಡಿ ಬಾಲಕೃಷ್ಣ ಅವರು ದೊರೆಸ್ವಾಮಿ ಆಯ್ಯಂಗಾರ್ಯರ ಪುತ್ರರು ಮತ್ತು ಪ್ರಮುಖ ಶಿಷ್ಯರು. ತಂದೆಯೊಂದಿಗೆ ಹಾಗೂ ಸ್ವತಂತ್ರವಾಗಿ ಪ್ರತಿಷ್ಠಿತ ಸಭೆಗಳಲ್ಲಿ, ವೇದಿಕೆಗಳಲ್ಲಿ ನುಡಿಸಿ, ಅಪಾರ ಮೆಚ್ಚುಗೆ ಗಳಿಸಿರುವ ಕಲಾವಿದರು. ಆಕಾಶವಾಣಿಯ ‘ಎ ಟಾಪ್’ ಕಲಾವಿದರಾಗಿರುವ ಅವರು ಇಂದು ಶೇಷಣ್ಣ ಬಾನಿಯ ನಿಜವಾದ ಪ್ರತಿನಿಧಿ. ಅವರೊಂದಿಗೆ ವಿದ್ವಾನ್ ಜಿ ಎಸ್ ರಾಮಾನುಜನ್ ಅವರು ಮೃದಂಗದಲ್ಲಿ ಮತ್ತು ವಿದ್ವಾನ್ ಎಸ್ ಮಂಜುನಾಥ್ ಅವರು ಘಟದಲ್ಲಿ ಸಹಕರಿಸಲಿದ್ದಾರೆ.