ಗಾನಭಾರತೀ ಜೂನ್ 21 ಸಂಜೆ 6:00 ಗಂಟೆಗೆ ಪ್ರಖ್ಯಾತ ಗಾಯಕ ವಿದ್ವಾನ್ ರಾಮಕೃಷ್ಣಮೂರ್ತಿ ಅವರ ಗಾಯನ ಕಾರ್ಯಕ್ರಮವನ್ನು ಇಟ್ಟುಕೊಂಡಿದೆ. ಅವರೊಂದಿಗೆ ಬಾಲ ಪ್ರತಿಭೆ ವಿದ್ವಾನ್ ವಿ ಎಸ್ ಗೋಕುಲ್ ವಯೋಲಿನ್ನಿನಲ್ಲಿ, ವಿದ್ವಾನ್ ತುಮಕೂರು ಬಿ ರವಿಶಂಕರ್ ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ಗುರುಪ್ರಸನ್ನ ಅವರು ಖಂಜಿರÀದಲ್ಲಿ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಶ್ರೀಮತಿ ಸುಗುಣಮ್ಮ ದಯಾಳು ಅವರ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದ್ವಾನ್ ರಾಮಕೃಷ್ಣಮೂರ್ತಿ ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪ್ರತಿಭಾವಂತ ಕಲಾವಿದ. ಮುಂಚೂಣಿಯಲ್ಲಿರುವ ಕಲಾವಿದರಾದ ಇವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಶ್ರೀಮತಿ ಪದ್ಮಾಕುಟ್ಟಿಯವರಲ್ಲಿ ಪ್ರಾರಂಭಿಸಿ, ಅನಂತರ ದೆಹಲಿ ಪಿ ಸುಂದರರಾಜನ್, ಅನಂತರ ವೈರಮಂಗಳಂ ಲಕ್ಷ್ಮೀನಾರಾಯಣ್, ಸಿ. ಆರ್ ವೈದ್ಯನಾಥನ್ ಮತ್ತು ಈಗ ವಿದ್ವಾನ್ ಆರ್ ಕೆ ಶ್ರೀರಾಂಕುಮಾರ್ ಅವರಲ್ಲಿ ಕಲಿಯುತ್ತಿದ್ದಾರೆ. ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಪದವೀಧರರಾದ ಇವರು ಸಂಗೀತವನ್ನೇ ವೃತ್ತಿಯಾಗಿ ಸ್ವೀಕರಿಸಿ ಚೆನ್ನೈನಲ್ಲಿ ನೆಲೆಸಿದ್ದಾರೆ. ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇವರಿಗೆ ಟಿ ಕೆ ಮೂರ್ತಿ, ಟಿ ವಿ ಗೋಪಾಲಕೃಷ್ಣನ್, ಉಮಯಾಳಪುರಂ ಸಿವರಾಮನ್, ನಾಗೈ ಮುರಳೀಧರನ್, ಮೈಸೂರು ಎಂ ನಾಗರಾಜ್ ಮತ್ತು ಡಾ ಎಂ ಮಂಜುನಾಥ್ ಮೊದಲಾದ ಹಿರಿಯರೆಲ್ಲಾ ಪಕ್ಕವಾದ್ಯದಲ್ಲಿ ಸಹಕರಿಸಿದ್ದಾರೆ. ಇವರ ಸೌಂದರ್ಯ ಪ್ರಜ್ಞೆ, ಉಚ್ಚಾರ, ಗಮಕದ ಸ್ಪಷ್ಟತೆ ಇತ್ಯಾದಿಗಳನ್ನು ಕುರಿತಂತೆ ವಿಮರ್ಶಕರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇವರಿಗೆ ಯಜ್ಞರಾಮನ್ ಪ್ರಶಸ್ತಿ, ಕಲ್ಕಿ ಕೃಷ್ಣಮೂರ್ತಿ ಸಂಸ್ಮರಣಾ ಪ್ರಶಸ್ತಿ, ಷಣ್ಮುಖ ಸಂಗೀತ ಶಿರೋಮಣಿ ಪ್ರಶಸ್ತಿ, ಮ್ಯೂಸಿಕ್ ಅಕಾಡೆಮಿಯಲ್ಲಿ ಅತ್ಯುತ್ತಮ ಗಾಯಕ ಪ್ರಶಸ್ತಿ ಇತ್ಯಾದಿ ಹಲವಾರು ಪ್ರಶಸ್ತಿಗಳು ಅತಿ ಚಿಕ್ಕ ವಯಸ್ಸಿನಲ್ಲೇ ಲಭಿಸಿವೆ.
ವಿದ್ವಾನ್ ಗೋಕುಲ್ ಬಾಲಪ್ರತಿಭೆಯಾಗಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟು, ಸಣ್ಣ ವಯಸ್ಸಿನಲ್ಲೇ ಪ್ರೌಢಿಮೆ ಸಾಧಿಸಿ ಎಲ್ಲಾ ಕಲಾವಿದರು ಬಯಸುವ ವಯೋಲಿನವಾದಕರಾಗಿದ್ದಾರೆ.
ತುಮಕೂರು ಬಿ ರವಿಶಂಕರ್ ಮುಂಚೂಣಿಯಲ್ಲಿರುವ ಬಹು ಬೇಡಿಕೆಯ ಮೃದಂಗವಾದಕರು. ತಂದೆ ವಿದ್ವಾನ್ ಭದ್ರಾಚಾರ್ ಅವರಲ್ಲಿ ಕಲಿತು ಅನಂತರ ವಿದ್ವಾನ್ ಕಾರೈಕುಡಿ ಮಣಿ ಅವರಲ್ಲಿ ಹೆಚ್ಚಿನ ಮಾರ್ಗದರ್ಶನ ಪಡೆದರು.
ವಿದ್ವಾನ್ ಗುರುಪ್ರಸನ್ನ ವಿದ್ವಾನ್ ವ್ಯಾಸ ವಿಠ್ಠಲ ಅವರ ಶಿಷ್ಯರು. ಖಂಜಿರವಾದನದಲ್ಲಿ ತುಂಬಾ ಹೆಸರು ಮಾಡಿರುವ ಕಲಾವಿದರು.