ವಿದುಷಿ ಶಂಕರಿ ಮೂರ್ತಿ ಬಾಳಿಲ ಅವರಿಂದ ಗಾಯನ
ಶ್ರೀ ಎಂ ನಾರಾಯಣ ಡೋಂಗ್ರೆ ಅವರ ನೆನಪಿನ ಕಾರ್ಯಕ್ರಮ - ವಿದುಷಿ ಶಂಕರಿ ಮೂರ್ತಿ ಬಾಳಿಲ ಅವರಿಂದ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅವರಿಗೆ ವಿದ್ವಾನ್ ಆರ್ ಅಚ್ಯುತರಾವ್ ಅವರು ವಯೋಲಿನ್ನಿನಲ್ಲಿ, ವಿದ್ವಾನ್ ಸುನಿಲ್ ಸುಬ್ರಮಣ್ಯ ಅವರು ಮೃದಂಗದಲ್ಲಿ ಮತ್ತು ವಿದ್ವಾನ್ ವಿ ಎಸ್ ರಮೇಶ್ ಅವರು ಮೋರ್ಸಿಂಗಿನಲ್ಲಿ ಸಹಕಾರ ನೀಡಲಿದ್ದಾರೆ.
ವಿದುಷಿ ಶಂಕರಿ ಮೂರ್ತಿ ಬಾಳಿಲ ಅವರು ವಿದುಷಿ ಡಾ. ಸುಕನ್ಯಾ ಪ್ರಭಾಕರ್ ಅವರ ಶಿಷ್ಯೆ. ಅಕಾಶವಾಣಿಯ ‘ಬಿ ಹೈ’ ಕಲಾವಿದೆಯಾಗಿರುವ ಶಂಕರಿ ಮೂರ್ತಿಯವರು ಹಲವು ಪ್ರತಿಷ್ಠಿತ ಸಂಗೀತ ಸಭೆಗಳಲ್ಲಿ, ದೂರದರ್ಶನದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಶ್ರೋತೃಗಳ, ಸಂಗೀತ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ ‘ಶ್ರುತಿಲಯ’ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುತ್ತಿದ್ದಾರೆ.
ವಿದ್ವಾನ್ ಆರ್ ಅಚ್ಯುತ ರಾವ್ ವಿದ್ವಾನ್ ಬಿ ರಘುರಾಂ ಅವರ ಶಿಷ್ಯರು. ಹಲವು ಹಿರಿಯ ಕಲಾವಿದರಿಗೆ ಪಕ್ಕವಾದ್ಯ ಸಹಕಾರ ನೀಡಿದ್ದಾರೆ. ಈಗ ವಯೋಲಿನ್ ಕ್ಷೇತ್ರದಲ್ಲಿ ತಮ್ಮದೇ ಆದ ಅಸ್ಮಿತೆಯನ್ನು ಕಂಡುಕೊಂಡಿದ್ದಾರೆ.
ವಿದ್ವಾನ್ ಸುನಿಲ್ ಸುಬ್ರಮಣ್ಯಂ ಅವರು ವಿದ್ವಾನ್ ಅರ್ಜುನ ಕುಮಾರ್ ಅವರಲ್ಲಿ, ಅನಂತರ ವಿದ್ವಾನ್ ಉಮಯಾಳಪುರಂ ಶಿವರಾಮನ್ ಅವರಲ್ಲಿ ಕಲಿತು, ಈಗ ವಿದ್ವಾನ್ ತಿರುಚ್ಚಿ ಶಂಕರನ್ ಅವರಲ್ಲಿ ಕಲಿಯುತ್ತಿದ್ದಾರೆ. ಆಕಾಶವಾಣಿಯ ‘ಎ’ ದರ್ಜೆ ಕಲಾವಿದರು. ಸಹವಾದನದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ.
ವಿದ್ವಾನ್ ವಿ ಎಸ್ ರಮೇಶ್ ಅವರು ವಿದ್ವಾನ್ ಪಿ ಜಿ ಲಕ್ಷ್ಮೀನಾರಾಯಣ ಅವರ ಶಿಷ್ಯರು. ಹಿರಿಯ ಲಯವಾದಕರಾದ ರಮೇಶ್ ಹಲವು ಪ್ರಮುಖ ಕಲಾವಿದರೊಂದಿಗೆ ನುಡಿಸಿ ಮೆಚ್ಚುಗೆ ಗಳಿಸಿದ್ದಾರೆ.