ಎಂ ಆರ್ ಸುಧಾ ಅವರಿಂದ ಗಾಯನ
ಗಾನಭಾರತಿಯಲ್ಲಿ ಏಪ್ರಿಲ್ 26ರಂದು ಸಂಜೆ 6 ಗಂಟೆಗೆ ಎಂ ಆರ್ ಸುಧಾ ಅವರಿಂದ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅವರಿಗೆ ವಿದ್ವಾನ್ ಮತ್ತೂರು ಶ್ರೀನಿಧಿ ಅವರು ವಯೋಲಿನಿನಲ್ಲಿ, ವಿದ್ವಾನ್ ತುಮಕೂರು ಬಿ.ರವಿಶಂಕರ್ ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ವಿಕ್ರಂ ಭಾರದ್ವಾಜ್ ಅವರು ಘಟದಲ್ಲಿ ಸಹಕರಿಸಲಿದ್ದಾರೆ.
ವಿದುಷಿ ಎಂ ಆರ್ ಸುಧಾ: ಸಂಗೀತ ಕುಟುಂಬಕ್ಕೆ ಸೇರಿದವರು. ಗಾನ ಕಲಾ ಭೂಷಣ ವಿದ್ವಾನ್ ಎಂ ಜೆ ಶ್ರೀನಿವಾಸ ಅಯ್ಯಂಗಾರ್ ಅವರ ಸಹೋದರರ ಮಗಳು. ತಂದೆ ಎಂ. ಜೆ ರಾಮಸ್ವಾಮಿ ಹಾಗೂ ಎಂ ಜೆ ಶ್ರೀನಿವಾಸ ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ಒಳ್ಳೆಯ ಗಾಯಕಿಯಾಗಿ ರೂಪುಗೊಂಡರು. ಅನಂತರ ಮೈಸೂರಿನ ಖ್ಯಾತ ವಿದುಷಿ ಹಾಗೂ ಜಿಎನ್‍ಬಿ ಅವರ ಶಿಷ್ಯರಾದ ಡಾ|| ಗೌರಿ ಕುಪ್ಪುಸ್ವಾಮಿಯವರಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರು. ಕರ್ನಾಟಕದ ಎಲ್ಲಾ ಪ್ರಸಿದ್ಧ ಸಭೆಗಳಲ್ಲಿ, ಚೆನ್ನೈಯ ಪಾರ್ಥಸಾರಥಿ ಸಭಾ, ಕಾರ್ತಿಕ್ ಫೈನ್‍ಆಟ್ರ್ಸ್, ನಾರದಗಾನ ಸಭಾ ಮುಂತಾದ ಕಡೆಗಳಲ್ಲಿ ಹಾಡಿದ್ದಾರೆ. ಬಹು ಪ್ರಮುಖ ಲಯವಾದಕರೆಲ್ಲರೂ ಇವರಿಗೆ ಪಕ್ಕವಾದ್ಯ ಸಹಕಾರ ನೀಡಿದ್ದಾರೆ. ಕರ್ನಾಟಕ ಸರ್ಕಾರ ನಡೆಸುವ ವಿದ್ವತ್ ಪರೀಕ್ಷೆಯಲ್ಲಿ ತೃತೀಯ ರ‍್ಯಾಂಕ್ ಗಳಿಸಿರುವ ಸುಧಾರವರು ಆಕಾಶವಾಣಿಯ ‘ಬಿ ಹೈ’ ಗ್ರೇಡ್ ಕಲಾವಿದರು.
ವಿದ್ವಾನ್ ಮತ್ತೂರು ಶ್ರೀನಿಧಿ: ಮತ್ತೂರು ಶ್ರೀನಿಧಿ ವಯೋಲಿನ್ ವಾದನದಲ್ಲಿ ಮುಂಚೂಣಿಯಲ್ಲಿರುವ ಕಲಾವಿದರು. ಹಲವಾರು ಹಿರಿಯ, ಕಿರಿಯಕಲಾವಿದರಿಗೆ ಪಕ್ಕವಾದ್ಯ ಸಹಕಾರ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ವಿದ್ವಾನ್‍ತುಮಕೂರು ಬಿ ರವಿಶಂಕರ್: ಕರ್ನಾಟಕದ ಖ್ಯಾತ ಮೃದಂಗವಾದಕರಾಗಿದ್ದ ವಿದ್ವಾನ್ ಭದ್ರಾಚಾರ್ ಅವರ ಪುತ್ರರು ಹಾಗೂ ಶಿಷ್ಯರು. ಅನಂತರ ವಿದ್ವಾನ್ ಕಾರೈಕುಡಿ ಆರ್ ಮಣಿ ಅವರಲ್ಲಿ ಹೆಚ್ಚಿನ ಮಾರ್ಗದರ್ಶನವನ್ನು ಪಡೆದರು. ಆಕಾಶವಾಣಿಯ ನಿಲಯದ ಕಲಾವಿದರಾಗಿರುವ ರವಿಶಂಕರ್ ಅವರು ಇಂದು ಬಹು ಬೇಡಿಕೆಯಲ್ಲಿರುವ ಮೃದಂಗಕಲಾವಿದರು.
ವಿಕ್ರಂ ಭಾರದ್ವಾಜ್: ವಿಕ್ರಂ ಭರದ್ವಾಜ್ ವಿದ್ವಾನ್ ಪಿಜಿಎಲ್ ಅವರಲ್ಲಿ ಪ್ರಾರಂಭದಲ್ಲಿ ಕಲಿತರು. ಆಮೇಲೆ ವಿದ್ವಾನ್ ರಮೇಶ್ ಹಾಗೂ ಈಗ ವಿದ್ವಾನ್‍ತುಮಕೂರು ಬಿ ರವಿಶಂಕರ್ ಅವರಲ್ಲಿ ಕಲಿಯುತ್ತಿದ್ದಾರೆ. ಲಯವಾದ್ಯದಲ್ಲಿ ಭರವಸೆ ಮೂಡಿಸುತ್ತಿರುವ ಕೆಲವೇ ಯುವಕರಲ್ಲಿ ಇವರೂ ಒಬ್ಬರು.